ಕೆಳದವಡೆ

 ಬಾಯಿಯನ್ನು ತೆರೆದು ಮತ್ತೆ ಮುಚ್ಚುವಾಗ ಆಡುವ ದವಡೆ, ಸಂಸ್ಕøತದಲ್ಲಿ ಹನು ಎನ್ನುವುದಿದೆ.  ಮನುಷ್ಯೇತರ ಕಶೇರುಕ ಪ್ರಾಣಿಗಳಲ್ಲಿ ಮುಸುಡಿ ಚಾಚಿಕೊಂಡಿರುವುದರಿಂದ ಕೆಳದವಡೆ ಮೂಳೆಯು (ಹನ್ವಸ್ಥಿ, ಮಾಂಡಿಬಲ್) ಉದ್ದವಾಗಿದೆ.  ಇದು ಆಕಾರದಲ್ಲಿ ಹೆಚ್ಚು ಕಡಿಮೆ ಕುದುರೆ ಲಾಳವನ್ನು ಹೋಲುತ್ತದೆ.  ಮನುಷ್ಯರಲ್ಲಿ ಚಾಚುಮೂತಿ ಇಲ್ಲದಿರುವುದರಿಂದ ಕೆಳದವಡೆ ಮೂಳೆ ಉದ್ದವಾಗಿಲ್ಲ.  ಆದರೆ, ಅದರ ಅಗಲ ಹೆಚ್ಚಿದ್ದು ಮಾತನಾಡುವಾಗ ಅದರ ಮಧ್ಯೆ ನಾಲಿಗೆ ಆಡಲು ಹೆಚ್ಚು ಅವಕಾಶವುಂಟು.

	ದವಡೆಯ ಕೀಲು ಮೇಲ್ದವಡೆಯ ಹಿಂದೆ ಮಿದುಳು ಬುರುಡೆಯ ಕೆಳಗೆ, ಕಿವಿಯ ಮುಂದೆ ಇದೆ.  ಈ ಕೀಲು ಒಂದೇ ಅಕ್ಷದ ಮೇಲೆ ತಿರುಗುವುದಿಲ್ಲ.  ಇದರಲ್ಲಿ ಹನ್ವಸ್ಥಿಯ ತಲೆಯಂತಿರುವ ಗಂಟು ಹಿಂದಕ್ಕೆ ಮುಂದಕ್ಕೆ ಆಡುವುದನ್ನು ಬಾಯಾಡಿಸುವಾಗ ಕಿವಿಯ ಮುಂದೆ ಮುಟ್ಟಿ ತಿಳಿಯಬಹುದು.  ಈ ಗಂಟು ಮುಂದಕ್ಕೆ ಸರಿದಾಗ ಹನ್ವಸ್ಥಿ ಸ್ವಲ್ಪ ಕೆಳಕ್ಕೆ ತಗ್ಗುವುದು.  ತೆರೆದ ಬಾಯಿ ಹೆಚ್ಚು ಅಗಲವಾಗಲು ಈ ಏರ್ಪಾಡು ಸಹಾಯಕಾರಿ.  ಹನ್ವಸ್ಥಿ ತಗ್ಗಿದಾಗ ಒಮ್ಮೊಮ್ಮೆ ದವಡೆ ಕೀಲು ತಪ್ಪಬಹುದು.  

	ಮಾಂಸಹಾರಿ ಪ್ರಾಣಿಗಳಲ್ಲಿ ಕೆಳದವಡೆ ಅಕ್ಕಪಕ್ಕಕ್ಕೆ ಆಡದೆ ಕೀಲು ಒಂದೇ ಅಕ್ಷದ ಮೇಲೆ ತಿರುಗುತ್ತದೆ.  ಸಸ್ಯಹಾರಿಗಳಲ್ಲಿ ಇದು ಅಕ್ಕಪಕ್ಕಕ್ಕೆ ಆಡುತ್ತದೆ.  ಮಾನವ ಮರ್ಕಟೇತ್ಯಾದಿಗಳಲ್ಲಿ ಇವೆರಡೂ ವಿಧಗಳು ಕೂಡಿರುವ ದವಡೆ ಕೀಲು ಉಂಟು.  ಮನುಷ್ಯ ಕೆಳದವಡೆಯನ್ನು ಮುಂಚಾಚಬಲ್ಲ.  ಹನ್ವಸ್ಥಿಯ ತಲೆಯ ಮುಂದೆ ಒಂದು ಮೊನಚು ಶಿಖರದಂತಿರುವ ಭಾಗಕ್ಕೆ ದವಡೆ ಸ್ನಾಯುಗಳಲ್ಲಿ ಅತಿಬಲವಾದ ಟೆಂಪೋರಾಲಿಸ್ ಎಂಬುದರ ಸ್ನಾಯು ಬಂಧನವಿದೆ.  ಪ್ರೌಢಾವಸ್ಥೆ ದಾಟಿದವರಲ್ಲಿ ಇದರ ಮುಂದೆ 16 ಹಲ್ಲುಗಳಿರುತ್ತವೆ.  5 ವರ್ಷದ ಮಗುವಿನಲ್ಲಿ 10 ಹಲ್ಲುಗಳಿರುತ್ತವೆ.  ಇತರ ಪ್ರಾಣಿಗಳಲ್ಲಿ ಹಲ್ಲುಗಳ ಸಂಖ್ಯೆ ಬೇರೆ ಬೇರೆ.  ಮನುಷ್ಯನಲ್ಲಿ ಕೋರೆಗಳಿಲ್ಲ.  ಮತ್ತು ಹಲ್ಲು ತುದಿಗಳೆಲ್ಲಾ ಒಂದೇ ಮಟ್ಟದಲ್ಲಿವೆ.  ಲಕ್ಷಾಂತರ ವರ್ಷಗಳ ಹಿಂದೆ ಆದಿಮಾನವ ಬೇಟೆಗಾರನಾಗಿದ್ದು ಕೆಲವು ಸಾವಿರ ವರ್ಷಗಳಿಂದೀಚೆಗೆ ತನ್ನ ಬುದ್ಧಿಶಕ್ತಿಯಿಂದ ಬೇಸಾಯ, ಅಡಿಗೆಗಳನ್ನು ಕಲಿತು ಅವನ ಆಹಾರ ಮೃದುವಾದಂತೆ ಅವನ ದವಡೆಗಳು ಸಣ್ಣವಾಗುತ್ತಾ ಬಂದು ಹನುಮನ ಮೂತಿ ಇಲ್ಲದಂತಾಗಿದೆ; ಮತ್ತು ಆದಿಮಾನವನಲ್ಲಿದ್ದಂತೆ ಹಲ್ಲುಗಳು ಸಮವಾಗಿ ಬಲವಾಗಿ ಇಲ್ಲದೆ ಕಾಲಕ್ರಮೇಣ ವಕ್ರವಾಗುತ್ತಾ ಬಂದಿವೆ.  ಹನ್ವಸ್ಥಿಯ ಹಲ್ಲು ಭಾಗ ಮಿಕ್ಕ ಭಾಗಕ್ಕಿಂತ ಹೆಚ್ಚು ಸಣ್ಣದಾಗಿರುವುದರಿಂದ ಮುಂದಿನ ಹಲ್ಲುಗಳು ಗಡ್ಡದ ಭಾಗಕ್ಕಿಂತ ಹಿಂದಿವೆ.  ಹೀಗೆ ಮುಂಚಾಚಿರುವ ಗಡ್ಡದ ಭಾಗ ಮನುಷ್ಯೇತರ ಪ್ರಾಣಿಗಳಲ್ಲಿಲ್ಲ.  ಗಡ್ಡ ಮುಂದಕ್ಕಿರುವುದು ಮಾನವನ ಬುದ್ಧಿಸೂಚಕ ಎಂದು ಹೇಳುತ್ತಾರೆ.  

	ಕೆಳದವಡೆಯನ್ನು ಮೇಲಕ್ಕೆತ್ತಲು ಟೆಂಪೋರಾಲಿಸ್, ಮ್ಯಾಸಿಟರ್, ಒಳಟಿರಿಗಾಯಿಡ್ ಸ್ನಾಯು ಜೊತೆಗಳಿವೆ.  ಬಾಯಿಯನ್ನು ತೆರೆಯಲಿರುವ ಸ್ನಾಯುಗಳು ಇಷ್ಟು ಬಲವಾಗಿಲ್ಲ;  ಇವುಗಳಲ್ಲಿ ಹೊರಟಿರಿಗಾಯಿಡ್ ಸ್ನಾಯು ಜೊತೆ ಬಲವಾದುದು.  ಹನ್ವಸ್ಥಿಯ ಹೊರಗಡೆ ಚರ್ಮ ಮತ್ತು ಮುಖದ ಕೆಲವು ಸ್ನಾಯುಗಳು ಅಂಟಿಕೊಂಡಿವೆ.  ಒಳಗಡೆ ಬಾಯಿಯ ಲೋಳೆಪೊರೆ ಮತ್ತು ನಾಲಿಗೆಯ ಕೆಲವು ಸ್ನಾಯುಗಳು ಅಂಟಿಕೊಂಡಿವೆ.  ಹಲ್ಲು ಬುಡಗಳ ಪಕ್ಕಗಳಲ್ಲಿ ಒಸಡುಗಳಲ್ಲಿ ಗಟ್ಟಿಯಾಗಿ ಅಂಟಿಕೊಂಡಿವೆ.

	ಗರ್ಭಾವಸ್ಥೆಯಲ್ಲಿ ಕೆಳದವಡೆಯ ಬಲ ಎಡ ಭಾಗಗಳು ಪ್ರತ್ಯೇಕ ಬೆಳೆದು ಗಡ್ಡದಲ್ಲಿ ಕೂಡಿಕೊಳ್ಳುತ್ತವೆ.  ಹೀಗೆ ಕೂಡದಿದ್ದರೆ ಹುಟ್ಟಿದ ಮಗುವಿನಲ್ಲಿ ಸೀಳುಗಡ್ಡ ಅಥವಾ ಸೀಳು ದವಡೆಯಿರುವುದು.  ಸೀಳುಗಡ್ಡವಿಲ್ಲದಾಗಲು ಕೂಸಿಗೆ 2 ವರ್ಷ ವಯಸ್ಸಾಗುವವರೆಗೂ ಹನ್ವಸ್ಥಿಯ ಎಡ ಬಲ ಭಾಗಗಳು ಗಡ್ಡದಲ್ಲಿ ಮೃದ್ವಸ್ಥಿಯಿಂದ ಬಂಧಿತವಾಗಿರುತ್ತವೆ.  ಆಮೇಲೆ ಮೃದ್ವಸ್ಥಿ ಎಲುಬಾಗುವುದರಿಂದ ಹನ್ವಸ್ಥಿ ಒಂದೇ ಮೂಳೆಯಾಗುತ್ತದೆ.  ಕೆಳದವಡೆ ಬೆಳೆಯದಿದ್ದರೆ ಹುಟ್ಟಿದ ಕೂಸಿನ ಕತ್ತಿನಲ್ಲಿ ಕಿವಿಗಳು ಅಕ್ಕಪಕ್ಕದಲ್ಲಿರುತ್ತವೆ; ಈ ಸ್ಥಿತಿ ಅತಿ ವಿರಳ.                                              
     (ಎಂ.ಡಿ.)